Thursday, March 4, 2010

ಮನವ ಕಾಡುವೆ ಚೆಲುವೆ ನೀನ್ಯಾರೆ.....

ಅದೊಂದು ದಿನ ನನ್ನೊಳಗಿನ ಗುಂಗಿನೊಂದಿಗೆ ನನ್ನೊಳಗೆ ನಾನೇ ಯೋಚಿಸುತ್ತ ಹೊರಟಿದ್ದಾಗ ಪಕ್ಕನೆ ಏನೋ ಮಿಂಚಿದಂತಾಗಿ ಕಣ್ಣು ಹೊರಳಿಸಿದಾಗ ಕಂಡದ್ದು ನಿನ್ನ ಮುಖ. ಅಂದಿನಿಂದ ನನ್ನೊಳಗಿನ ಆಲೋಚನೆಗಳೆಲ್ಲವೂ ನೀನೇ ಆಗಿಬಿಟ್ಟಿರುವೆಯಲ್ಲ. ಅಂತಹ ಆಕರ್ಷಣೆ ನಿನ್ನಲ್ಲಿ ಏನಿತ್ತು ಎಂಬುದೇ ಒಂದು ಯಕ್ಷಪ್ರಶ್ನೆಯಾಗಿ ಇಂದಿಗೂ ನನ್ನನ್ನು ಕಾಡುತ್ತಿದೆ. ಅಂದು ಕಂಡ ನಿನ್ನನ್ನು ಮತ್ತೆ ಕಾಣುವ ತವಕದಿಂದ ಅಂದು ನೀನು ಕಂಡ ಸ್ಥಳಕ್ಕೆ ಅದೆಷ್ಟು ಸಾರಿ ಬಂದೆನೋ ನನಗೇ ನೆನಪಿಲ್ಲ. ಮುಂಗಾರಿನ ಮಿಂಚಿನಂತೆ ಕ್ಷಣಕಾಲವೇ ಮಿಂಚಿ ಮರೆಯಾದರೂ ನನ್ನೊಳಗಿನ ನಿನ್ನ ಬೆಳಕು ಇನ್ನೂ ಮರೆಯಾಗಿಲ್ಲ ಎಂದರೆ ನಂಬು. ಮುಂಗಾರಿನ ಮಿಂಚಿನ ನಂತರ ಸುರಿವ ತಂಪು ಮಳೆಯಂತೆ ನಿನ್ನಿಂದ ಏನನ್ನೋ ನಿರೀಕ್ಷಿಸಿದ ನನ್ನ ಮನಕ್ಕೆ ಅಂದಿನಿಂದ ತಂಪೇ ಇಲ್ಲದಂತಾಗಿದೆ ಎಂದರೆ ನಂಬು. ಅಂದು ವಿಶ್ವ ಸುಂದರಿಯರ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ್ದಾಗ ಇಡೀ ವಿಶ್ವ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರೂ ಅದರತ್ತ ಕಣ್ಣೆತ್ತಿಯೂ ನೋಡದವನು ನಾನು,
ಅಂತಹ ನಾನೇ ನಿನ್ನಂತಹ ಸಾಧಾರಣ ರೂಪಿನ ಹುಡುಗಿಯನ್ನು ನೋಡಿ ಚಲಿಸಿ ಹೋದೆನೆಂದರೆ ನಂಬು. ಸಾಧಾರಣ ರೂಪಿನ ಹುಡುಗಿಯೆಂದದ್ದಕ್ಕೆ ನೀನೇನೂ ಬೇಸರಿಸಿಕೊಳ್ಳಬೇಡ. ಮಾಧುರಿ ದೀಕ್ಷಿತ್,ಐಶ್ವರ್ಯ ರೈ,ಮುಂತಾದ ಸಿನಿಮಾ ಸ್ಟಾರ್ ಗಳಿಗಿಂತ ಸ್ವಲ್ಪ ಕಡಿಮೆ ರೂಪವನ್ನು ಹೊಂದಿರುವುದು ಕಡಿಮೆಯೇನಲ್ಲ, ಆದರೂ ಸಾಧಾರಣ ರೂಪ ಎಂದಾಗ ಬರುವ ಕೋಪದಲ್ಲಿ ನಿನ್ನಂದ ಹೆಚ್ಚುತ್ತದೆಂದರೆ ನಂಬು. ಅಂದೇನೋ ನೀನು ಮುಂಗಾರಿನ ಮಿಂಚಿನಂತೆ ಮೂಡಿ ಮರೆಯಾಗಿಬಿಟ್ಟೆ. ಆದರೆ ನಂತರ ಬರುವ ಜೋರುಮಳೆ, ತಂಪು ತಂಗಾಳಿ. ಆಹ್ಲಾದಕರ ವಾತಾವರಣ , ಮಳೆಯಲ್ಲಿ ಮಿಂದೆದ್ದ ಭೂತಾುಯ ಸ್ನಿಗ್ದ ರೂಪ, ಮನಸೂರೆಗೊಳ್ಳುವ ಪ್ರಕೃತಿಯ ಸೌಂದರ್ಯಕ್ಕಾಗಿ ಎದುರು ನೋಡುತ್ತಲೇ ಇದ್ದೇನೆ.ಆದರೆ ನನ್ನ ಮನದಲ್ಲಿ ಅವೆಲ್ಲವುಗಳನ್ನೂ ಮೂಡಿಸಬೇಕಿದ್ದ ನಿನ್ನ ಸುಳಿವೇ ಇಲ್ಲ. ಎಂತಹ ಸುಂದರಿಯರನ್ನು ಕಂಡಾಗಲೂ ಆರ್ತಗೊಳ್ಳದಿದ್ದ ನನ್ನ ಮನ ಅಂದೇ ನಿನ್ನನ್ನು ಕಂಡು ಕರಗಬೇಕಿತ್ತೇ. ಎಂದೂ ಇಲ್ಲದೆ ಅಂದೇ ನೀನು ನನಗೆ ಕಾಣಿಸಿ ಕೊಳ್ಳಬೇಕಿತ್ತೇ. ಒಮ್ಮೆ ಮಾತ್ರವೇ ಕಂಡ ನಿನ್ನ ಮುಖ ನನ್ನನ್ನು ಇಷ್ಟು ಕಾಡುತ್ತಿದೆ ಎಂದರೆ ನನ್ನೊಂದಿಗೆ ನಿನ್ನ ಪೂರ್ವಜನ್ಮದ ನಂಟೇನಾದರೂ ಇದೆಯೇ? ಗೊತ್ತಿಲ್ಲ.. ಆದರೂ ನೀನು ನನ್ನನ್ನು ಕಾಡುತ್ತಿರುವುದಂತೂ ನಿಜ. ಸಾಧ್ಯವಾದಷ್ಟು ಬೇಗ ನಿನ್ನನ್ನು ಮತ್ತೆ ಕಾಣುವ ಆಶಾಭಾವನೆಯೊಂದಿಗೆ...
--- ಮ.ನಾ.ಕೃಷ್ಣಮೂರ್ತಿ,,,mob.9449994934 e-mail-manaakrish44@gmail.com

No comments:

Post a Comment