Tuesday, March 23, 2010

ಚಂದ್ರ ಬಂಧನ(ಕವನ)

ಚಂದ್ರ ಬಂಧನ(ಕವನ)

ಮಹಡಿಯ ಮೇಲೆ ನಿಂತು ಚಂದ್ರನನ್ನೇ ನೋಡುತ್ತಿದ್ದೆ

ಅವನು ಯಾರಿಗೋ ಕಾಯುತ್ತಿದ್ದ

ಮಾತನಾಡಿಸಿದರೆ ಮಾತನಾಡುತ್ತಿಲ್ಲ

ಕೂಗಿದರೆ ಓಗೊಡುತ್ತಿಲ್ಲ

ನಗಿಸಿದರೆ ನಗುತ್ತಿಲ್ಲ

ಸುಮ್ಮನೆ ಬಿಮ್ಮನೆ ನಿಂತಲ್ಲಿ ನಿಂತೇ ಇದ್ದ

ನಾನು ಕರೆದು ಕೂಗಿದೆ

ಊಹುಂ, ಆತ ನನ್ನೆಡೆಗೆ ನೋಡಲೇ ಇಲ್ಲ

ನಾನು ಪಕ್ಕಕ್ಕೆ ತಿರುಗಿ ನೋಡಿದೆ

ಅಂಗಾತ ಮಲಗಿದ್ದ ನನ್ನ ಮನದನ್ನೆಯ

ನೇತ್ರಗಳಲ್ಲಿ ಅವನು ನಗುತ್ತಿದ್ದ..!

ನಾನವನನ್ನು ನನ್ನಾಕೆಯ ಅಕ್ಷುಗಳಿಗೆ

ಚುಂಬಿಸುವ ನೆಪದಲ್ಲಿ ಬಂಧಿಸಿಟ್ಟೆ.. !!!!--------ಮ.ನಾ.ಕೃಷ್ಣಮೂರ್ತಿ

Thursday, March 4, 2010

ಮುನಿಸೇಕೆ ಚೆಲುವೆ..ಹೀಗ್ಯಾಕೆ ಚೆಲುವೆ,,,,,,,,,,,

ಮುನಿಸೇಕೆ ಚೆಲುವೆ..ಹೀಗ್ಯಾಕೆ ಚೆಲುವೆ,,,,,,,,,,

ಬೆಳದಿಂಗಳಿನಂತ ಚೆಲುವ ಹೊತ್ತು
ಮುಖದ ತುಂಬ ನಗುವ ಹೊತ್ತು
ಕಣ್ಣ ತುಂಬ ಗೆಲುವ ಹೊತ್ತು
ಮನಸ ತುಂಬ ಪ್ರೀತಿ ಹೊತ್ತು
ಎದೆಯ ತುಂಬ ಪ್ರೇಮ ಹೊತ್ತು
ನಿಲ್ಲುತಿದ್ದಳು ನನ್ನ ಚೆಲುವೆ ಇಂದೇಕೆ ಹೀಗೆ
ಮುನಿಸೇಕೆ ಹೀಗೆ..ಹೀಗೇಕೆ ಚೆಲುವೆ
-----ಮ.ನಾ.ಕೃಷ್ಣಮೂರ್ತಿ,ಮೊ-9449994934, e-mail-manaakrish44@gmail.com
ಮನವ ಕಾಡುವೆ ಚೆಲುವೆ ನೀನ್ಯಾರೆ.....

ಅದೊಂದು ದಿನ ನನ್ನೊಳಗಿನ ಗುಂಗಿನೊಂದಿಗೆ ನನ್ನೊಳಗೆ ನಾನೇ ಯೋಚಿಸುತ್ತ ಹೊರಟಿದ್ದಾಗ ಪಕ್ಕನೆ ಏನೋ ಮಿಂಚಿದಂತಾಗಿ ಕಣ್ಣು ಹೊರಳಿಸಿದಾಗ ಕಂಡದ್ದು ನಿನ್ನ ಮುಖ. ಅಂದಿನಿಂದ ನನ್ನೊಳಗಿನ ಆಲೋಚನೆಗಳೆಲ್ಲವೂ ನೀನೇ ಆಗಿಬಿಟ್ಟಿರುವೆಯಲ್ಲ. ಅಂತಹ ಆಕರ್ಷಣೆ ನಿನ್ನಲ್ಲಿ ಏನಿತ್ತು ಎಂಬುದೇ ಒಂದು ಯಕ್ಷಪ್ರಶ್ನೆಯಾಗಿ ಇಂದಿಗೂ ನನ್ನನ್ನು ಕಾಡುತ್ತಿದೆ. ಅಂದು ಕಂಡ ನಿನ್ನನ್ನು ಮತ್ತೆ ಕಾಣುವ ತವಕದಿಂದ ಅಂದು ನೀನು ಕಂಡ ಸ್ಥಳಕ್ಕೆ ಅದೆಷ್ಟು ಸಾರಿ ಬಂದೆನೋ ನನಗೇ ನೆನಪಿಲ್ಲ. ಮುಂಗಾರಿನ ಮಿಂಚಿನಂತೆ ಕ್ಷಣಕಾಲವೇ ಮಿಂಚಿ ಮರೆಯಾದರೂ ನನ್ನೊಳಗಿನ ನಿನ್ನ ಬೆಳಕು ಇನ್ನೂ ಮರೆಯಾಗಿಲ್ಲ ಎಂದರೆ ನಂಬು. ಮುಂಗಾರಿನ ಮಿಂಚಿನ ನಂತರ ಸುರಿವ ತಂಪು ಮಳೆಯಂತೆ ನಿನ್ನಿಂದ ಏನನ್ನೋ ನಿರೀಕ್ಷಿಸಿದ ನನ್ನ ಮನಕ್ಕೆ ಅಂದಿನಿಂದ ತಂಪೇ ಇಲ್ಲದಂತಾಗಿದೆ ಎಂದರೆ ನಂಬು. ಅಂದು ವಿಶ್ವ ಸುಂದರಿಯರ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ್ದಾಗ ಇಡೀ ವಿಶ್ವ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರೂ ಅದರತ್ತ ಕಣ್ಣೆತ್ತಿಯೂ ನೋಡದವನು ನಾನು,
ಅಂತಹ ನಾನೇ ನಿನ್ನಂತಹ ಸಾಧಾರಣ ರೂಪಿನ ಹುಡುಗಿಯನ್ನು ನೋಡಿ ಚಲಿಸಿ ಹೋದೆನೆಂದರೆ ನಂಬು. ಸಾಧಾರಣ ರೂಪಿನ ಹುಡುಗಿಯೆಂದದ್ದಕ್ಕೆ ನೀನೇನೂ ಬೇಸರಿಸಿಕೊಳ್ಳಬೇಡ. ಮಾಧುರಿ ದೀಕ್ಷಿತ್,ಐಶ್ವರ್ಯ ರೈ,ಮುಂತಾದ ಸಿನಿಮಾ ಸ್ಟಾರ್ ಗಳಿಗಿಂತ ಸ್ವಲ್ಪ ಕಡಿಮೆ ರೂಪವನ್ನು ಹೊಂದಿರುವುದು ಕಡಿಮೆಯೇನಲ್ಲ, ಆದರೂ ಸಾಧಾರಣ ರೂಪ ಎಂದಾಗ ಬರುವ ಕೋಪದಲ್ಲಿ ನಿನ್ನಂದ ಹೆಚ್ಚುತ್ತದೆಂದರೆ ನಂಬು. ಅಂದೇನೋ ನೀನು ಮುಂಗಾರಿನ ಮಿಂಚಿನಂತೆ ಮೂಡಿ ಮರೆಯಾಗಿಬಿಟ್ಟೆ. ಆದರೆ ನಂತರ ಬರುವ ಜೋರುಮಳೆ, ತಂಪು ತಂಗಾಳಿ. ಆಹ್ಲಾದಕರ ವಾತಾವರಣ , ಮಳೆಯಲ್ಲಿ ಮಿಂದೆದ್ದ ಭೂತಾುಯ ಸ್ನಿಗ್ದ ರೂಪ, ಮನಸೂರೆಗೊಳ್ಳುವ ಪ್ರಕೃತಿಯ ಸೌಂದರ್ಯಕ್ಕಾಗಿ ಎದುರು ನೋಡುತ್ತಲೇ ಇದ್ದೇನೆ.ಆದರೆ ನನ್ನ ಮನದಲ್ಲಿ ಅವೆಲ್ಲವುಗಳನ್ನೂ ಮೂಡಿಸಬೇಕಿದ್ದ ನಿನ್ನ ಸುಳಿವೇ ಇಲ್ಲ. ಎಂತಹ ಸುಂದರಿಯರನ್ನು ಕಂಡಾಗಲೂ ಆರ್ತಗೊಳ್ಳದಿದ್ದ ನನ್ನ ಮನ ಅಂದೇ ನಿನ್ನನ್ನು ಕಂಡು ಕರಗಬೇಕಿತ್ತೇ. ಎಂದೂ ಇಲ್ಲದೆ ಅಂದೇ ನೀನು ನನಗೆ ಕಾಣಿಸಿ ಕೊಳ್ಳಬೇಕಿತ್ತೇ. ಒಮ್ಮೆ ಮಾತ್ರವೇ ಕಂಡ ನಿನ್ನ ಮುಖ ನನ್ನನ್ನು ಇಷ್ಟು ಕಾಡುತ್ತಿದೆ ಎಂದರೆ ನನ್ನೊಂದಿಗೆ ನಿನ್ನ ಪೂರ್ವಜನ್ಮದ ನಂಟೇನಾದರೂ ಇದೆಯೇ? ಗೊತ್ತಿಲ್ಲ.. ಆದರೂ ನೀನು ನನ್ನನ್ನು ಕಾಡುತ್ತಿರುವುದಂತೂ ನಿಜ. ಸಾಧ್ಯವಾದಷ್ಟು ಬೇಗ ನಿನ್ನನ್ನು ಮತ್ತೆ ಕಾಣುವ ಆಶಾಭಾವನೆಯೊಂದಿಗೆ...
--- ಮ.ನಾ.ಕೃಷ್ಣಮೂರ್ತಿ,,,mob.9449994934 e-mail-manaakrish44@gmail.com

ಓವರ್ ಟು ಅರಳೀಕಟ್ಟೆ,,,,,,

ಓವರ್ ಟು ಅರಳೀಕಟ್ಟೆ,,,,,,

ಸಮಾಜ ಸ್ವಯಂಘೋಷಿತ ಆಧುನೀಕತೆ ಒಳಪಡಿಸಿಕೊಂಡ ನಂತರ, ನಮ್ಮ ಹಳ್ಳಿಗಳ ಅಂತರಂಗದಲ್ಲಿ ಜೀವನಾಡಿಗಳಾಗಿ ಒಂದಾಗಿ ಬೆರೆತು ಹೋಗಿದ್ದ ಅರಳಿಕಟ್ಟೆಗಳು ತಮ್ಮ ಗತವೈಭವವನ್ನು ಕಳೆದು ಕೊಳ್ಳುತ್ತಿವೆಯಾ? ಹೀಗೊಂದು ಪ್ರಶ್ನೆ ಮನದಾಳದಲ್ಲಿ ಮೂಡಿದ್ದು ಮೊನ್ನೆ ಊರಿಗೆ ಹೋದಾಗ,, ಅದೇಕೋ ಅರಳೀಕಟ್ಟೆ ದೀನವಾಗಿ ನನ್ನ ಕಡೆಗೆ ನೋಡಿತ್ತಾ? ಅಥವಾ ನನಗೆ ಹಾಗನ್ನಿಸಿತ್ತಾ? ಗೊತ್ತಿಲ್ಲ.ಹಿಂದೆಲ್ಲಾ ಅರಳೀಕಟ್ಟೆಗಳು ಎಷ್ಟೆಲ್ಲಾ ಗತವೈಭವದಿಂದ ಮೆರೆದಿದ್ದವು. ಊರಿನಲ್ಲಿ ಯಾವುದೇ ನ್ಯಾಯ ಪಂಚಾಯಿತಿಗಳು,ಹಳ್ಳಿಗೆ ಸಂಬಂಧಿಸಿದ ಯಾವುದೇ ವಿಷಯಗಳು ಚರ್ಚೆಯಾಗಿ ತೀರ್ಮಾನವಾಗುತ್ತಿದ್ದುದು ಈ ಅರಳೀಕಟ್ಟೆಗಳ ಮೇಲೆಯೇ, ಇವು ಹಳ್ಳಿಗರ ಜೀವನಾಡಿಗಳಲ್ಲಿ ಎಷ್ಟೊಂದು ಮಿಳಿತವಾಗಿರುತ್ತಿತ್ತೆಂದರೆ ಅವರ ನಡುವಿನ ಜಗಳಗಳಲ್ಲಿಯೂ ನಿನ್ನನ್ನು ಅರಳೀಕಟ್ಟೆಗೆ ಎಳೆದು ದಂಡ ಹಾಕಿಸ್ತೀನಿ ನೋಡ್ತಿರು ಎಂಬಂತಹ ಮಾತುಗಳು ಸರ್ವೇ ಸಾಮಾನ್ಯವಾಗಿರುತ್ತಿದ್ದವು,
ಹಬ್ಬ-ಹರಿದಿನ-ಹುಣ್ಣಿಮೆ ಗಳಲ್ಲಿ ಹಳ್ಳಿಯಜನ ಅರಳೀಕಟ್ಟೆಗಳ ಬಳಿ ಸೇರಿ ತಮ್ಮ ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದು ಸರ್ವೇ ಸಾಮಾನ್ಯವಾಗಿತ್ತು. ಅಂದಿನ ದಿನಗಳಲ್ಲಿ ಹಳ್ಳಿಗರು ತಮ್ಮ ಕಲೆ ಸಂಸ್ಕೃತಿ ಗಳನ್ನು ಪ್ರದರ್ಶಿಸಲು ಅರಳೀಕಟ್ಟೆ ಒಂದು ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಅಷ್ಟೇ ಅಲ್ಲ, ಅರಳೀಕಟ್ಟೆ ಸುತ್ತಲು ಬರುತ್ತಿದ್ದ ಗ್ರಾಮಕನ್ಯೆಯರ ಕೃಪಾಕಟಾಕ್ಷಕಾಗಿ ಹಳ್ಳಿಹೀರೋಗಳ ದಂಡೇ ನೆರೆದಿರುತ್ತಿತ್ತು.ಹಳ್ಳಿಗೆ ಬರುವ ನಾಟಕ ತಂಡಗಳು, ಹೊಟ್ಟೆಹೊರೆಯಲು ಬರುತ್ತಿದ್ದ ಹಾವಾಡಿಗರು, ಗ್ರ್ರಾಮಾಫೋನ್ ಹಾಡಿಗೆ ತಮ್ಮದೇ ಶೈಲಿಯಲ್ಲಿ ಕುಣಿಯುವವರು, ವ್ಯಾಪಾರಿಗಳು, ಅಲೆಮಾರಿಗಳು,ಇತ್ಯಾದಿ ಅನೇಕ ಜನರಿಗೆ ಅರಳೀಕಟ್ಟೆ ಪ್ರಧಾನ ಆದರೆ ತಾತ್ಕಾಲಿಕ ವಾಸ್ತವ್ಯದ ಸ್ಥಳವಾಗಿಯೂ ಬಳಕೆಯಲ್ಲಿತ್ತು. ತಂದೆ ಮಕ್ಕಳ ನಡುವೆ ವೈಮನಸ್ಯ ತಲೆದೋರಿದಾಗ ಒಬ್ಬರು ಮುನಿಸಿಕೊಂಡು ಅರಳೀ ಕಟ್ಟೆಯ ಮೇಲೆ ಒಂದುರಾತ್ರಿ ಮಲಗಿದರೆಂದರೆ ಮರುದಿನ ಇಡೀ ಹಳ್ಳಿ ಸೇರಿ ಅವರ ಮಧ್ಯೆ ರಾಜೀ ಮಾಡಿಸುತ್ತಿದ್ದ ದಿನಗಳು ಮತ್ತೆ ಬರುವುದಿಲ್ಲವೇನೋ ಎನಿಸುತ್ತದೆ.ಈಗಂತೂ ಮಾತೆತ್ತಿದರೆ ಕೋಟರ್ು ಕಚೇರಿ ಎಂದು ಅಲೆದಾಡುವ ಮಂದಿಗೆ, ಇಂದು ಕೋರ್ಟುಗಳಲ್ಲಿ ವರ್ಷಾನುಗಟ್ಟಲೆ ತೆಗೆದುಕೊಳ್ಳುವ ನ್ಯಾಯನಿರ್ಣಯಗಳು ಅಂದಿನ ಅರಳೀಕಟ್ಟೆಗಳಲ್ಲಿ ಕೆಲವೇ ನಿಮಿಷಗಳಲ್ಲಿ ತೀರ್ಮಾನವಾಗಿ ಬಿಡುತ್ತಿದ್ದ ಸತ್ಯಗಳೇಕೆ ಅರಿವಾಗುತ್ತಿಲ್ಲವೋ ತಿಳಿಯುತ್ತಿಲ್ಲ.ಅಂದು ಅರಳೀಕಟ್ಟೆ ನ್ಯಾಯವೆಂಬುದು ಅಬ್ಬಬ್ಬಾ ಎಂದರೆ ಬೆಳಿಗ್ಗೆ ಹತ್ತು ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಹನ್ನೆರಡಕ್ಕೆ ಮುಕ್ತಾಯ ಹಾಗೂ ತೀರ್ಪು ಪ್ರಕಟಣೆ ಎಲ್ಲವೂ ಆಗಿಹೋಗುತ್ತಿತ್ತು. ಊರಿನ ಉತ್ಸವಗಳಲ್ಲಿ ಅರಳೀಕಟ್ಟೆ ಸಿಂಗರಿಸಿಕೊಂಡು ನವವಧುವಿನಂತೆ ಕಂಗೊಳಿಸುತ್ತಿತ್ತು. ಅರಳೀ ಕಟ್ಟೆಯ ನಾಗರಕಲ್ಲುಗಳಿಗೆ ವಿಶೇಷ ಪೂಜೆ ನಡೆಯುತ್ತಿತ್ತು.ಅಂದಿನ ಅರಳೀ ಕಟ್ಟೆಗಳು ಬರೀ ನ್ಯಾಯಪಂಚಾಯಿತಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಸಂಜೆಯಾದರೆ ಇಡೀ ಊರಿನ ಜನ ತಮ್ಮ ಹೊಲದ ಕೆಲಸಗಳನ್ನು ಮುಗಿಸಿಕೊಂಡು ಅರಳೀಕಟ್ಟೆಯ ಬಳಿ ಸೇರುತ್ತಿದ್ದರು. ಅಲ್ಲಿ ಹಳ್ಳಿಗೆ ಸಂಬಂಧಿಸಿದ ವಿಚಾರಗಳು. ಬೆಳೆಗಳ ಬಗೆಗಿನ ಸಮಾಚಾರಗಳು, ರಾಜಕೀಯ ವಿಚಾರಗಳೆಲ್ಲವೂ ಚರ್ಚೆಯಾಗುತ್ತಿದ್ದವು. ಅರಳೀಕಟ್ಟೆಗಳಿಂದಾಗಿ ಅಂದಿನ ಜನಕ್ಕೆ ತಾವು ಹಳ್ಳಿಯಲ್ಲಿ ಒಬ್ಬಂಟಿಗರೆಂಬ ಭಾವನೆ ಎಂದಿಗೂ ಸುಳಿಯುತ್ತಿರಲಿಲ್ಲ. ಅಕಸ್ಮಾತ್ ಯಾರಿಗಾದರೂ ಖಾಯಿಲೆ ಕಸಾಲೆಯೋ ಆಗಿ ಅರಳೀಕಟ್ಟೆಯಲ್ಲಿ ಪ್ರಸ್ತಾಪವಾಯಿತೆಂದರೆ ಮುಗಿುತು. ಇಡೀ ಊರಿನ ಜನತೆ ಅದು ತಮ್ಮವರಿಗೇ ಬಂದ ತೊಂದರೆಯೆಂಬಂತೆ ಸ್ಪಂದಿಸುತ್ತಿದ್ದರು. ಹಾಗಾಗಿ ತಾವು ಏಕಾಂಗಿಗಳೆಂಬ ಭಾವನೆ ಯಾರಿಗೂ ಸುಳಿಯುತ್ತಿರಲಿಲ್ಲ. ಆದರೆ,,,,,,ಇಂದು ಅರಳೀಕಟ್ಟೆಗಳು ಪಾಳುಬಿದ್ದ ಪಳಯುಳಿಕೆಗಳಂತೆ ಹಳ್ಳಿಗಳ ನಡುವೆ ತಾವೇ ಏಕಾಂಗಿಗಳಾಗಿಬಿಟ್ಟಂತೆ ಕಾಣುತ್ತಿವೆ. ಆಧುನೀಕತೆಗೆ ಮಾರುಹೋದ ಹಳ್ಳಿಹೀರೋ/ಯಿನ್ಗಳು (ಕ್ಷಮೆುರಲಿ) ಯುವಜನಾಂಗ ನಗರಕ್ಕೆ ವಲಸೆ ಬಂದು ಅತ್ತ ಪೂರ್ತಿ ಹಳ್ಳಿಯ ಸೊಗಡನ್ನೂ ಉಳಿಸಿಕೊಳ್ಳಲಾರದೆ ಇತ್ತ ಪೂರ್ಣವಾಗಿ ನಗರದ ಜೀವನಶೈಲಿಗೂ ಒಗ್ಗಿಕೊಳ್ಳಲಾರದೆ ಒದ್ದಾಡುತ್ತಿರುವುದನ್ನು ನೋಡಿದರೆ ಅರ್ಥವಾಗದ ತಳಮಳ ಆವರಿಸುತ್ತದೆ. ಇನ್ನು ನಗರಕ್ಕೆ ವಲಸೆ ಬಂದ ಹಳ್ಳಿಗರು ತಾವೇ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿರುವಾಗ ತಮ್ಮ ಊರಿನ ಅರಳೀಕಟ್ಟೆಗಳ ಬಗ್ಗೆ ಆಸ್ಥೆ ವಹಿಸುತ್ತಾರೆಯೆ?ಅದಕ್ಕೆಂದೇ ಆಂಧ್ರ ಮುಖ್ಯಮಂತ್ರಿಯಾಗಿದ್ದ ದಿವಂಗತ. ವೈ.ಎಸ್.ಆರ್. ತಮ್ಮ ಸರಕಾರಿ ಕಾರ್ಯಕ್ರಮದ ಯೋಜನೆಗಳಲ್ಲಿಯೇ ರಚ್ಚಬಂಡ ಯೋಜನೆ(ಅರಳೀಕಟ್ಟೆ)ಯನ್ನೂ ಹಮ್ಮಿಕೊಂಡಿದ್ದರು. ಅದರ ಉದ್ಘಾಟನೆಗಾಗಿ ಹೊರಟಾಗಲೇ ಅವರು ಹೆಲಿಕಾಪ್ಟರ್ ಅಪಘಾತಕ್ಕೆ ತುತ್ತಾದದ್ದು ವಿಧಿವಿಪರ್ಯಾಸ.ಅದೇನೇ ಇರಲಿ, ಹಳ್ಳಿಗರೆಲ್ಲಾ ನಗರಕ್ಕೆ ವಲಸೆ ಬಂದು ಅಸ್ಥಿತ್ವ ಅರಸುತ್ತಿರುವ ಈ ಕಾಲದಲ್ಲಿಯೂ ನನ್ನ ಮಿತ್ರ ಹಾಗೂ ಸಹೋದ್ಯೋಗಿ ನಾಗರಾಜು ಮೆಚ್ಚುಗೆಯಾಗುತ್ತಾನೆ. ಆತ ಕರ್ನಾಟಕ ಸರಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಸಂಸ್ಥೆಗೆ ಸೇರಿದಂದಿನಿಂದ ಬೆಂಗಳೂರಿನಲ್ಲಿರಲು ಸಾಕಷ್ಟು ಅನುಕೂಲತೆಗಳಿದ್ದರೂ ಕೂಡಾ ಆತನ ಹುಟ್ಟೂರಾದ ಗೌರೀಬಿದನೂರಿನ ವಾಟದಹೊಸಹಳ್ಳಿುಂದ ದಿನವೂ ಬೆಂಗಳೂರಿಗೆ ಬಂದು ಹೋಗುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೆಂದರೆ ಕಳೆದವಾರ ಆತನ ಹುಟ್ಟೂರಿನಲ್ಲಿ ತನ್ನದೇ ಖರ್ಚಿನಲ್ಲಿ ಒಂದು ಅರಳೀಕಟ್ಟೆಯನ್ನು ಕಟ್ಟಿಸಿದ್ದಾನೆ.ಅದರ ಉದ್ಘಾಟನೆಯನ್ನೂ ವೈಭವವಾಗಿಯೇ ಮಾಡಿದ್ದಾನೆ. ಆ ಮೂಲಕ ಅರಳೀಕಟ್ಟೆಗಳ ಗತವೈಭವವನ್ನು ಮರಳಿ ತರಲು ತನ್ನದೊಂದು ಪುಟ್ಟಪ್ರಯತ್ನವನ್ನು ಮಾಡಿದ್ದಾನೆ.ಆತನ ಪ್ರಯತ್ನಕ್ಕೆ ನಿಮ್ಮಿಂದ ಒಂದು ಶ್ಲಾಘನೆಯಿರಲಿ,,,,,,,--ಮ.ನಾ.ಕೃಷ್ಣಮೂರ್ತಿ ಮೊ.9449994934 e-mail-manaakrish44@gmail.com

ಅಂತರಾಳದ ಹಪಹಪಿ-ಭಾಗ 2,,,,,,,,,

ಅಂತರಾಳದ ಹಪಹಪಿ-ಭಾಗ 2,,,,,,,,,

ಮನದ ಮೂಲೆಯಲ್ಲೆಲ್ಲೋ ಎದ್ದ ಸಣ್ಣದೊಂದು ಸಿಡುಕನ್ನು ಉಪಶಮನಗೊಳಿಸುವ ನೆಪದಲ್ಲಿ ಒಂದು ಸಿಗಾರ್ ಸೇದಿಬಿಡುವಂತೆ ಮನಸು ಆಮಿಷ ಒಡ್ಡಿದಾಗ ಇಲ್ಲವೆನ್ನಲಾಗದೆ ಕಾಲುಗಳು ಅಂಗಡಿಯತ್ತ ಹೆಜ್ಜೆ ಹಾಕಿದ್ದವು. ಅಂಗಡಿಯಾತ ನಗುನಗುತ್ತಾ ನೀಡಿದ ಸಿಗರೇಟು ಶ್ವಾಸಕೋಶದ ಕ್ಯಾನ್ಸರಿಗೆ ಪೂರಕ ಸಹಾಯ ಒದಗಿಸುತ್ತದೆಂಬ ಅಂಶ ಸರ್ಕಾರಿ ಜಾಹೀರಾತುಗಳು, ವೈದ್ಯಕೀಯ ಸಂಸ್ಥೆಗಳೂ ಜಗಜ್ಜಾಹೀರು ಗೊಳಿಸಿದ್ದರೂ,,ಕೂಡ ಆ ಕ್ಷಣದಲ್ಲಿ ಅದನ್ನೆಲ್ಲಾ ಬದಿಗೊತ್ತಿ,ಸಿಗಾರಿನ ಮೊನೆಗೆ ಬೆಂಕಿ ತಾಗಿಸಿ ದೀರ್ಘವಾಗಿ * ಧಂ?'*'ಎಳೆದು ಪಕ್ಕಕ್ಕೆ ತಿರುಗಿದಾಗ ಕಂಡಿದ್ದು ಸಣ್ಣದೊಂದು ಜಗಳ. ಅದೇನೆಂದು ನೋಡುವ ಮನಸ್ಸಿಲ್ಲದಿದ್ದರೂ ಮಾನವ ಸಹಜವಾದ ಕೆಟ್ಟ ಕುತೂಹಲ ನನ್ನನ್ನತ್ತ ಸೆಳೆದೊಯ್ದಿತ್ತು. ಕುರುಚಲು ಗಡ್ಡದ ವ್ಯಕ್ತಿಯೊಬ್ಬ ಬಾರೊಂದರ ಮಾಲೀಕನೊಟ್ಟಿಗೆ ಜಗಳದಲ್ಲಿ ನಿರತನಾಗಿದ್ದ. ಬಾರ್ ನ ಮಾಲೀಕ ಜೋರುಜೋರು ಮಾತುಗಳೊಟ್ಟಿಗೆ ಗರಂ ಆಗಿದ್ದ. ಎದುರಿನ ವ್ಯಕ್ತಿ ದೈನೇಸಿ ಸ್ಥಿತಿಯಲ್ಲಿ ನಿಂತಿದ್ದ ಎಂದು ನನಗನ್ನಿಸಿತಾದರೂ ಸುತ್ತಲಿನ ಜನಕ್ಕೆ ಹಾಗನ್ನಿಸಿದಂತಿರಲ್ಲ. ಯಾವುದೋ ದಾರಿ ಜಗಳ ಎನಿಸಿ ಹೊರಡಲು ತಯಾರಾಗುತ್ತಿದ್ದಂತೆ ಅದುವರೆಗೆ ನೋಡಿದ ನೋಟ ಕಣ್ಣಿನ ಮೂಲಕ ಸಾಗಿ ಮಸ್ತಿಷ್ಕವನ್ನು ತಲುಪಿ ಆ ಎದುರಿನ ವ್ಯಕ್ತಿಯನ್ನು ಎಲ್ಲೋ ನೋಡಿದಂತೆ ಭಾಸವಾಗಿತ್ತು. ಅರೇ..! ಎಂದು ಮತ್ತೊಮ್ಮೆ ನೆನಪಿನ ಪುಟಗಳನ್ನು ತೆರೆಯುತ್ತಾ ಹೋದಂತೆ ಸ್ಮೃತಿ ಪಟಲದ ಮೇಲೆ ಹಾದು ಬಂದವನು ಹಿಂದೊಮ್ಮೆ ನನ್ನ ಸಹೋದ್ಯೋಗಿಯಾಗಿದ್ದ, ತಾನು ಮೇಲಧಿಕಾರದಲ್ಲಿದ್ದೇನೆಂಬ ಹಮ್ಮಿನಲ್ಲಿ ನನ್ನನ್ನೂ ಸೇರಿಸಿದಂತೆ ನಮ್ಮೊಟ್ಟಿಗಿನ ಉದ್ಯೋಗಿಗಳನ್ನು ಕಾಡಿಸಿ ಪೀಡಿಸುತ್ತಿದ್ದ, ಪ್ರೀತಿುಂದಲೋ,ದ್ವೇಷದಿಂದಲೋ ನಾವೆಲ್ಲರೂ ಅಡ್ಡಹೆಸರಿಟ್ಟಿದ್ದ ಶ್ರೀಮಾನ್ ಕಟೋರಿ. ಅಂದು ಹಾಗೆಲ್ಲಾ ಎಲ್ಲರನ್ನೂ ಪೀಡಿಸಿ ಒಂದು ರೀತಿಯ ದಾದಾನಂತೆ ಬೆಳೆದು,ಜೀವಿಸಿದ್ದ ಕಟೂರಿ ಇವನೇನಾ ಎನಿಸಿ ಮತ್ತೊಮ್ಮೆ ಅವನತ್ತ ನೋಡಿದ್ದೆ. ಅದಾಗಲೇ ಅವನ ಕಣ್ಣು ನನ್ನನ್ನು ಗುರುತಿಸಿಬಿಟ್ಟಿದ್ದವು. ಅವನು ನನ್ನ ಹೆಸರಿಡಿದು ಕೂಗುತ್ತಾ ನನ್ನೆಡೆಗೆ ಓಡುತ್ತಲೇ ಬಂದುಬಿಟ್ಟಿದ್ದ. ಸುತ್ತಲಿನ ಜನ ನನ್ನನ್ನೇ ನೋಡತೊಡಗಿದಾಗ ನನಗೆ ವಿಪರೀತ ಎಂಬಷ್ಟು ಮುಜುಗರವಾದರೂ ಅಲ್ಲಿಂದ ಹೊರಟು ಹೋಗಲು ಮನಸ್ಸಾಗದೆ ಅಲ್ಲಿಯೇ ನಿಂತೆ. ಕಟೂರಿ ನನ್ನ ಬಳಿಗೆ ಬಂದವನೇ ತಾನು ಹಿಂದೆ ಮಾಡಿದ ತಪ್ಪುಗಳೆಲಲ್ಲವನ್ನೂ ಕ್ಷಮಿಸುವಂತೆ ಕಣ್ಣಿನಲ್ಲಿಯೇ ಕೋರಿ ಫಿಪ್ಟಿ ರುಪೀಸ್ ಪ್ಲೀಸ್ ಎನ್ನುತ್ತ ಕೈ ಒಡ್ಡಿದ್ದ. ನಾನು ಮರುಮಾತನಾಡದೆ ಐವತ್ತು ರೂಪಾಯಿ ನೋಟನ್ನು ಅವನ ಕೈಗಿಟ್ಟಿದ್ದೆ. ಅವನು ಕೂಡಲೇ ಅದನ್ನು ತೆಗೆದುಕೊಂಡು ಆ ಬಾರ್ ಮಾಲೀಕನ ಕೈಗೆ ತುರುಕಿ ನನಗೊಂದು ಥ್ಯಾಂಕ್ಸ್ ಅನ್ನೂ ಹೇಳಲು ಮರೆತವನಂತೆ ದುಡುದುಡನೆ ಹೊರಟು ಹೋಗಿದ್ದ. ಮನಸ್ಸಿನಲ್ಲಿ ಅದೆಂತದೋ ಅರ್ಥವಾಗದ ಭಾವವೊಂದು ಮೂಡಿ ಮರೆಯಾಗಿತ್ತು. ಮನಸ್ಸು ತನ್ನ ವಿಷಣ್ಣತೆಯನ್ನು ಹೋಗಲಾಡಿಸಿಕೊಳ್ಳಲು ಮತ್ತೊಂದು ಸಿಗಾರ್ ಅನ್ನು ಸೇದುವಂತೆ ಮನಸ್ಸು ಆಮಿಷವೊಡ್ಡುತ್ತಿತ್ತು..
--ಮ.ನಾ.ಕೃಷ್ಣಮೂರ್ತಿ ಮೊ:9449994934 e-mail- manaakrish44@gmail.com
ಅಂತರಾಳದ ಹಪಹಪಿ,,,,,,,,,

ಮನದಲಿ ಮೂಡಿದ ಹಿಮಾಲಯದ ಮಂಜುಗಡ್ಡೆಯ ಕುಳಿರ್-ಕೊರೆತವನ್ನು ಸಹಿಸಿಕೊಂಡು, ಸಹಿಸಿಕೊಂಡು ಮುಂದುವರೆದು ನಡೆದಾಗ ಕಾಣಿಸಿದ್ದು,ಪೂರ್ವಾಶ್ರಮದ ಪ್ರೇಯಸಿ... ಮುಖ ನೋಡಿದ ಕೂಡಲೇ ಬೆಚ್ಚಿಬಿದ್ದಂತಾದದ್ದು ಸುಳ್ಳಲ್ಲದಿದ್ದರೂ,ಬೆಚ್ಚಿದ್ದು ಯಾಕೆ ಅನ್ನೋದು ಪ್ರಶ್ನೆ.ಮನಸಿನಾಳದ ನಿಜವಾದ ಉತ್ತರವೆಂದರೆ ಅಂದು ಅಷ್ಟೊಂದು ಇಷ್ಟಪಟ್ಟು ಪ್ರೇಮಿಸಿದ್ದು,ಅವಳಿಗಾಗಿ ಪ್ರಾಣವನ್ನಾದರೂ ಕೊಡಲು ಸಿದ್ದವಾಗಿದ್ದು, ಮನೆಯ ಎಲ್ಲರ ಪ್ರೀತಿ-ನಂಬಿಕೆ ವಿಶ್ವಾಸಗಳನ್ನೂ ತ್ಯಜಿಸಿ ಅವಳಿಗಾಗಿ ಎಂತಹ ತ್ಯಾಗಕ್ಕೂ ಸಿದ್ದನಾಗಿದ್ದು,ಆ ಕಾಲದಲ್ಲಿ ನನಗೆ ಹೆಣ್ಣು ಕೊಡಲು ತುದಿಗಾಲಲ್ಲಿ ನಿಂತಿದ್ದ ಭಾರೀ ಜಮೀನ್ದಾರಿ ಮನೆತನದ ಸ್ಪುರದ್ರೂಪಿ ಹೆಣ್ಣನ್ನೂ ತಿರಸ್ಕರಿಸುವಂತೆ ಮಾಡಿದ್ದ ರೂಪಸಿ ಇವಳೇನಾ? ನಾನು ಅವಳಿಗಾಗಿ ಅಷ್ಟೊಂದು ಹಪಹಪಿಕೆುಂದ ಇರುವಾಗ ನನ್ನನ್ನು ತಿರಸ್ಕರಿಸಿ ಬೇರೊಬ್ಬನನ್ನು ಮದುವೆಯಾಗಿ ಚೆಂದದ ಸಂಸಾರ ಹೂಡಲು ಹೋದವಳು ಇವಳೇನಾ?..ಮತ್ತೊಮ್ಮೆ ಕಣ್ಣುಜ್ಜಿಕೊಂಡು ನೋಡಿದೆ..ಅವಳೇ.. ಆದರೆ ಇದೇನು? ಇಷ್ಟು ಚಿಕ್ಕ ವಯಸ್ಸಿಗೇ ನರೆತು ಹೋದ ಕೂದಲು. ಸುಕ್ಕುಗಟ್ಟಿದ ಮುಖ.ಗುಳಿ ಬಿದ್ದ ಕೆನ್ನೆಗಳು. ಬಾವಿಯಲ್ಲಿಳಿದ ಕಣ್ಣುಗಳು.ಸೊರಗಿ ಹೋದ ಶರೀರ..ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಕ್ಲಿಯೋಪಾತ್ರ ಕೂಡ ಹೀಗೆಯೇ ಆಗುತ್ತಿದ್ದಳೇನೋ?... ಚೆನ್ನಾಗಿದ್ದೀರಾ?? ಅವಳು ಮಾತನಾಡಿಸಿದಳು..ಹೌದು ನಾನು ಚೆನ್ನಾಗಿದ್ದೇನೆ..ನೀನು ಹೇಗಿದ್ದೀಯ???ಕೇಳಲು ಹೊರಟವನಿಗೆ ಮಾತೇ ಹೊರಡಲಿಲ್ಲ..
---ಮ.ನಾ.ಕೃಷ್ಣಮೂರ್ತಿ mob-9449994934 e-mail-manaakrish44@gmail.com

ಪ್ರೀತಿಯ ಶಿಖರವನ್ನೇರಿದಾಗ.....

ಪ್ರೀತಿಯ ಶಿಖರವನ್ನೇರಿದಾಗ.....

ನಾನು ಮೌಂಟ್ ಎವರೆಸ್ಟ್ ಶಿಖರ, ಪ್ರಪಂಚದ ಅತ್ಯಂತ ಎತ್ತರದ ಶಿಖರ, ನನ್ನನ್ನು ಇದುವರೆಗೂ ಯಾವ ಮಾನವ ಪ್ರಾಣಿಯೂ ಹತ್ತಲು ಸಾಧ್ಯ್ಯವಾಗಲಿಲ್ಲ. ಎಲ್ಲರಿಗಿಂತ ನಾನು ಮೇಲಿದ್ದೇನೆಯೇ ಹೊರತು ನನಗಿಂತ ಮೇಲೆ ಯಾರೂ ಇಲ್ಲ. ನನ್ನನ್ನು ತನ್ನ ಪಾದದಡಿ ಮೆಟ್ಟಿ ನಿಲ್ಲಬಲ್ಲ ಭೂಪ ಇನ್ನೂ ಹುಟ್ಟಿಲ್ಲವೆಂದು ಬೀಗುತ್ತಿದ್ದ ಮೌಂಟ್ ಎವರೆಸ್ಟ್ ಶಿಖರವೆಂಬ ಶಿಖರವೇ ಅಂದು ಎಡ್ಮ್ಂಡ್ ಹಿಲರಿ ಮತ್ತು ತೇನ್ ಸಿಂಗ್ ತನ್ನನ್ನು ಮೆಟ್ಟಿ ನಿಂತಾಗ, ಮೌಂಟ್ ಎವರೆಸ್ಟ್ ಶಿಖರದ ಮುಖವನ್ನು ಒಮ್ಮೆ ನೋಡಬೇಕಿತ್ತು. ಶತಮಾನಗಳಿಂದ ತಲೆಯೆತ್ತಿ ಬೀಗುತ್ತಿದ್ದ , ತನ್ನನ್ನು ಮಣಿಸಲು ಸಾಧ್ಯವೇ ಇಲ್ಲವೆಂದು ಮೆರೆಯುತ್ತಿದ್ದ ಮೌಂಟ್ ಎವರೆಸ್ಟ್ ಅಂದು ಅವಮಾನದಿಂದ ಕುಗ್ಗಿ ಹೋಗಿತ್ತಾ? ಅಥವಾ ತನ್ನನ್ನು ಮೆಟ್ಟಿ ನಿಂತ ಪೋರರ ಬಗ್ಗೆ ಮೆಚ್ಚುಗೆ ಆಗುತ್ತಾ?.
ಇಡೀ ಪ್ರಪಂಚದಲ್ಲಿ ತನಗಿಂತ ಸುಂದರಿ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿರುವ ನಿನ್ನ ನೆನಪಾದಾಗಲೊಮ್ಮೆ ನನಗೆ ಮೌಂಟ್ ಎವರೆಸ್ಟ್ ಶಿಖರದ ನೆನಪಾಗುತ್ತದೆ. ಪ್ರಪಂಚದ ಅತ್ಯಂತ ಎತ್ತರದ ಮಹಾನ್ ಶಿಖರದ ಜೊತೆಗೆ ನಿನ್ನನ್ನು ಹೋಲಿಸುವುದು ಸೂಕ್ತವಲ್ಲದಿದ್ದರೂ ಇಂದಿನ ನಿನ್ನ ಅಹಮಿಕೆಯ ಮನಸ್ಥಿತಿಗೆ ಅಂತಹ ಮಹಾನ್ ಶಿಖರವನ್ನು ಹೋಲಿಸಿದರೆ ಮಾತ್ರವೇ ನಿನ್ನ ಮನಸ್ಸಿಗೆ ನಾಟುತ್ತದೆಂಬ ದೂರದ ಆಶಯದೊಂದಿಗೆ ಇದನ್ನು ಪ್ರಸ್ತಾಪಿಸುತ್ತಿದ್ದೇನೆ. ಇದರಿಂದಾಗಿ ನೀನು ಇನ್ನೊಂದಿಷ್ಟು ಅಹಮ್ಮಿನೊಂದಿಗೆ ಬೀಗಬೇಕಿಲ್ಲ. ನಿನ್ನ ಅಹಮ್ಮು ಎಂದಿಗೂ ಶಾಶ್ವತ ಅಲ್ಲವೆಂಬುದು ಸೂರ್ಯನಷ್ಟೇ ಪ್ರಖರವಾದ ಸತ್ಯವಾದರೂ ಈ ಸತ್ಯದ ದರ್ಶನ ನಿನಗೇಕೆ ಆಗುತ್ತಿಲ್ಲವೆಂಬುದು ನಿನ್ನ ಮೂರ್ಖತನವೋ ಅಥವಾ ನಿನ್ನಲ್ಲಿ ಇಂತಹುದನ್ನು ನಿರೀಕ್ಷಿಸುತ್ತಿರುವ ನನ್ನ ದಡ್ಡತನವೋ ತಿಳಿಯುತ್ತಿಲ್ಲ. ಆದರೂ ಒಂದಂತೂ ಸತ್ಯ. ಅಂದು ತೇನ್ಸಿಂಗ್ ಎವರೆಸ್ಟ್ ಶಿಖರವನ್ನೇರಿದಂತೆ ನಾನೂ ಕೂಡ ಎಂದಾದರೊಂದು ದಿನ ನಿನ್ನ ಪ್ರೀತಿಯ ಶಿಖರವನ್ನೇರುವುದು ಸತ್ಯ. ಆ ದಿನ ನೀನೂ ಕೂಡ ಎವರೆಷ್ಟ್ ನಂತೆಯೇ ಅವಮಾನದಿಂದ ಕುಗ್ಗಿ ಹೋಗುವುದೂ ಸತ್ಯ. ಅಂದು ಅಂತಹುದೇ ಅಹಮ್ಮಿನಲ್ಲಿದ್ದ ಎವರೆಸ್ಟ್ ಅನ್ನು ತೇನ್ ಸಿಂಗ್ ನೋರ್ಗೆ ಪ್ರೀತಿುಂದ ಹತ್ತಿದ್ದ. ಅದು ಸ್ವತಃ ಎವರೆಸ್ಟ್ ಶಿಖರಕ್ಕೇ ಅವಮಾನವಾದಂತೆ , ಅದು ಇಡೀ ಪ್ರಪಂಚಕ್ಕೆ ವಿಜಯೋತ್ಸವದಂತೆ ಕಂಡರೂ ತೇನ್ಸಿಂಗ್ ನಲ್ಲಿ ಮಾತ್ರ ಅತ್ಯಂತ ಪ್ರೀತಿುಂದ ಕಂದನೊಬ್ಬ ತನ್ನ ತಾಯಿಯ ಮಡಿಲನ್ನೇರಿ ನಿಂತಂತಹ ವಿನೀತ ಭಾವ ಆವರಿಸಿತ್ತು.
ಹಾಗೆಯೇ ನಾನು ನಿನ್ನ ಪ್ರೀತಿಯ ಶಿಖರವನ್ನು ಏರಿ ನಿಂತ ದಿನ ಸ್ವತಃ ನಿನಗೆ ಏನನ್ನಿಸುತ್ತದೆಯೋ ಗೊತ್ತಿಲ್ಲ. ನಾನು ನಿನ್ನ ಪ್ರೀತಿಯ ಶಿಖರವನ್ನೇರಿದಾಗ ನಮ್ಮ ಸುತ್ತಲಿನ ಪ್ರಪಂಚಕ್ಕೆ ಅದು ನಾನು ಸಾಧಿಸಿದ ಘನ ವಿಜಯದಂತೆ ಭಾಸವಾಗುತ್ತದೆಯೋ ಗೊತ್ತಿಲ್ಲ.ಆದರೆ ನಾನು ಮಾತ್ರ ನಿನ್ನ ಪ್ರೀತಿಯನ್ನು ಪಡೆದ ದಿನ ವಿನಮ್ರ ನಾಗುತ್ತೇನೆ,ವಿಧೇಯನಾಗುತ್ತೇನೆ,ಅಮ್ಮನ ಪ್ರೇಮವನ್ನು ಪಡೆದ ಕಂದನ ಹಾಗೆ,,,,,,,! ಆ ದಿನ ನೀನು ಸೋತೆನೆಂದು ಅವಮಾನದಿಂದ ಕುಗ್ಗಿ ಹೋಗಬಾರದು. ಅಂದು ನಿನ್ನ ಮುಖದಲ್ಲಿ ಕಂದನಿಗೆ ಕಾರುಣ್ಯಭರಿತ ಮಮತೆಯನ್ನು ಉಣಿತ್ತಿರುವ ತಾಯಿಯ ಮೊಗದಲ್ಲಿರುವಂತಹ ಸಂತೃಪ್ತಿಯಿರಬೇಕು. ನೆನಪಿರಲಿ !ಮ.ನಾ.ಕೃಷ್ಣಮೂರ್ತಿ
ಮೊಬೈಲ್;9449994934 e-mail: manaakrish44@gmail.com