Thursday, March 4, 2010

ಪ್ರೀತಿಯ ಶಿಖರವನ್ನೇರಿದಾಗ.....

ಪ್ರೀತಿಯ ಶಿಖರವನ್ನೇರಿದಾಗ.....

ನಾನು ಮೌಂಟ್ ಎವರೆಸ್ಟ್ ಶಿಖರ, ಪ್ರಪಂಚದ ಅತ್ಯಂತ ಎತ್ತರದ ಶಿಖರ, ನನ್ನನ್ನು ಇದುವರೆಗೂ ಯಾವ ಮಾನವ ಪ್ರಾಣಿಯೂ ಹತ್ತಲು ಸಾಧ್ಯ್ಯವಾಗಲಿಲ್ಲ. ಎಲ್ಲರಿಗಿಂತ ನಾನು ಮೇಲಿದ್ದೇನೆಯೇ ಹೊರತು ನನಗಿಂತ ಮೇಲೆ ಯಾರೂ ಇಲ್ಲ. ನನ್ನನ್ನು ತನ್ನ ಪಾದದಡಿ ಮೆಟ್ಟಿ ನಿಲ್ಲಬಲ್ಲ ಭೂಪ ಇನ್ನೂ ಹುಟ್ಟಿಲ್ಲವೆಂದು ಬೀಗುತ್ತಿದ್ದ ಮೌಂಟ್ ಎವರೆಸ್ಟ್ ಶಿಖರವೆಂಬ ಶಿಖರವೇ ಅಂದು ಎಡ್ಮ್ಂಡ್ ಹಿಲರಿ ಮತ್ತು ತೇನ್ ಸಿಂಗ್ ತನ್ನನ್ನು ಮೆಟ್ಟಿ ನಿಂತಾಗ, ಮೌಂಟ್ ಎವರೆಸ್ಟ್ ಶಿಖರದ ಮುಖವನ್ನು ಒಮ್ಮೆ ನೋಡಬೇಕಿತ್ತು. ಶತಮಾನಗಳಿಂದ ತಲೆಯೆತ್ತಿ ಬೀಗುತ್ತಿದ್ದ , ತನ್ನನ್ನು ಮಣಿಸಲು ಸಾಧ್ಯವೇ ಇಲ್ಲವೆಂದು ಮೆರೆಯುತ್ತಿದ್ದ ಮೌಂಟ್ ಎವರೆಸ್ಟ್ ಅಂದು ಅವಮಾನದಿಂದ ಕುಗ್ಗಿ ಹೋಗಿತ್ತಾ? ಅಥವಾ ತನ್ನನ್ನು ಮೆಟ್ಟಿ ನಿಂತ ಪೋರರ ಬಗ್ಗೆ ಮೆಚ್ಚುಗೆ ಆಗುತ್ತಾ?.
ಇಡೀ ಪ್ರಪಂಚದಲ್ಲಿ ತನಗಿಂತ ಸುಂದರಿ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿರುವ ನಿನ್ನ ನೆನಪಾದಾಗಲೊಮ್ಮೆ ನನಗೆ ಮೌಂಟ್ ಎವರೆಸ್ಟ್ ಶಿಖರದ ನೆನಪಾಗುತ್ತದೆ. ಪ್ರಪಂಚದ ಅತ್ಯಂತ ಎತ್ತರದ ಮಹಾನ್ ಶಿಖರದ ಜೊತೆಗೆ ನಿನ್ನನ್ನು ಹೋಲಿಸುವುದು ಸೂಕ್ತವಲ್ಲದಿದ್ದರೂ ಇಂದಿನ ನಿನ್ನ ಅಹಮಿಕೆಯ ಮನಸ್ಥಿತಿಗೆ ಅಂತಹ ಮಹಾನ್ ಶಿಖರವನ್ನು ಹೋಲಿಸಿದರೆ ಮಾತ್ರವೇ ನಿನ್ನ ಮನಸ್ಸಿಗೆ ನಾಟುತ್ತದೆಂಬ ದೂರದ ಆಶಯದೊಂದಿಗೆ ಇದನ್ನು ಪ್ರಸ್ತಾಪಿಸುತ್ತಿದ್ದೇನೆ. ಇದರಿಂದಾಗಿ ನೀನು ಇನ್ನೊಂದಿಷ್ಟು ಅಹಮ್ಮಿನೊಂದಿಗೆ ಬೀಗಬೇಕಿಲ್ಲ. ನಿನ್ನ ಅಹಮ್ಮು ಎಂದಿಗೂ ಶಾಶ್ವತ ಅಲ್ಲವೆಂಬುದು ಸೂರ್ಯನಷ್ಟೇ ಪ್ರಖರವಾದ ಸತ್ಯವಾದರೂ ಈ ಸತ್ಯದ ದರ್ಶನ ನಿನಗೇಕೆ ಆಗುತ್ತಿಲ್ಲವೆಂಬುದು ನಿನ್ನ ಮೂರ್ಖತನವೋ ಅಥವಾ ನಿನ್ನಲ್ಲಿ ಇಂತಹುದನ್ನು ನಿರೀಕ್ಷಿಸುತ್ತಿರುವ ನನ್ನ ದಡ್ಡತನವೋ ತಿಳಿಯುತ್ತಿಲ್ಲ. ಆದರೂ ಒಂದಂತೂ ಸತ್ಯ. ಅಂದು ತೇನ್ಸಿಂಗ್ ಎವರೆಸ್ಟ್ ಶಿಖರವನ್ನೇರಿದಂತೆ ನಾನೂ ಕೂಡ ಎಂದಾದರೊಂದು ದಿನ ನಿನ್ನ ಪ್ರೀತಿಯ ಶಿಖರವನ್ನೇರುವುದು ಸತ್ಯ. ಆ ದಿನ ನೀನೂ ಕೂಡ ಎವರೆಷ್ಟ್ ನಂತೆಯೇ ಅವಮಾನದಿಂದ ಕುಗ್ಗಿ ಹೋಗುವುದೂ ಸತ್ಯ. ಅಂದು ಅಂತಹುದೇ ಅಹಮ್ಮಿನಲ್ಲಿದ್ದ ಎವರೆಸ್ಟ್ ಅನ್ನು ತೇನ್ ಸಿಂಗ್ ನೋರ್ಗೆ ಪ್ರೀತಿುಂದ ಹತ್ತಿದ್ದ. ಅದು ಸ್ವತಃ ಎವರೆಸ್ಟ್ ಶಿಖರಕ್ಕೇ ಅವಮಾನವಾದಂತೆ , ಅದು ಇಡೀ ಪ್ರಪಂಚಕ್ಕೆ ವಿಜಯೋತ್ಸವದಂತೆ ಕಂಡರೂ ತೇನ್ಸಿಂಗ್ ನಲ್ಲಿ ಮಾತ್ರ ಅತ್ಯಂತ ಪ್ರೀತಿುಂದ ಕಂದನೊಬ್ಬ ತನ್ನ ತಾಯಿಯ ಮಡಿಲನ್ನೇರಿ ನಿಂತಂತಹ ವಿನೀತ ಭಾವ ಆವರಿಸಿತ್ತು.
ಹಾಗೆಯೇ ನಾನು ನಿನ್ನ ಪ್ರೀತಿಯ ಶಿಖರವನ್ನು ಏರಿ ನಿಂತ ದಿನ ಸ್ವತಃ ನಿನಗೆ ಏನನ್ನಿಸುತ್ತದೆಯೋ ಗೊತ್ತಿಲ್ಲ. ನಾನು ನಿನ್ನ ಪ್ರೀತಿಯ ಶಿಖರವನ್ನೇರಿದಾಗ ನಮ್ಮ ಸುತ್ತಲಿನ ಪ್ರಪಂಚಕ್ಕೆ ಅದು ನಾನು ಸಾಧಿಸಿದ ಘನ ವಿಜಯದಂತೆ ಭಾಸವಾಗುತ್ತದೆಯೋ ಗೊತ್ತಿಲ್ಲ.ಆದರೆ ನಾನು ಮಾತ್ರ ನಿನ್ನ ಪ್ರೀತಿಯನ್ನು ಪಡೆದ ದಿನ ವಿನಮ್ರ ನಾಗುತ್ತೇನೆ,ವಿಧೇಯನಾಗುತ್ತೇನೆ,ಅಮ್ಮನ ಪ್ರೇಮವನ್ನು ಪಡೆದ ಕಂದನ ಹಾಗೆ,,,,,,,! ಆ ದಿನ ನೀನು ಸೋತೆನೆಂದು ಅವಮಾನದಿಂದ ಕುಗ್ಗಿ ಹೋಗಬಾರದು. ಅಂದು ನಿನ್ನ ಮುಖದಲ್ಲಿ ಕಂದನಿಗೆ ಕಾರುಣ್ಯಭರಿತ ಮಮತೆಯನ್ನು ಉಣಿತ್ತಿರುವ ತಾಯಿಯ ಮೊಗದಲ್ಲಿರುವಂತಹ ಸಂತೃಪ್ತಿಯಿರಬೇಕು. ನೆನಪಿರಲಿ !ಮ.ನಾ.ಕೃಷ್ಣಮೂರ್ತಿ
ಮೊಬೈಲ್;9449994934 e-mail: manaakrish44@gmail.com

No comments:

Post a Comment