Thursday, March 4, 2010

ಅಂತರಾಳದ ಹಪಹಪಿ-ಭಾಗ 2,,,,,,,,,

ಅಂತರಾಳದ ಹಪಹಪಿ-ಭಾಗ 2,,,,,,,,,

ಮನದ ಮೂಲೆಯಲ್ಲೆಲ್ಲೋ ಎದ್ದ ಸಣ್ಣದೊಂದು ಸಿಡುಕನ್ನು ಉಪಶಮನಗೊಳಿಸುವ ನೆಪದಲ್ಲಿ ಒಂದು ಸಿಗಾರ್ ಸೇದಿಬಿಡುವಂತೆ ಮನಸು ಆಮಿಷ ಒಡ್ಡಿದಾಗ ಇಲ್ಲವೆನ್ನಲಾಗದೆ ಕಾಲುಗಳು ಅಂಗಡಿಯತ್ತ ಹೆಜ್ಜೆ ಹಾಕಿದ್ದವು. ಅಂಗಡಿಯಾತ ನಗುನಗುತ್ತಾ ನೀಡಿದ ಸಿಗರೇಟು ಶ್ವಾಸಕೋಶದ ಕ್ಯಾನ್ಸರಿಗೆ ಪೂರಕ ಸಹಾಯ ಒದಗಿಸುತ್ತದೆಂಬ ಅಂಶ ಸರ್ಕಾರಿ ಜಾಹೀರಾತುಗಳು, ವೈದ್ಯಕೀಯ ಸಂಸ್ಥೆಗಳೂ ಜಗಜ್ಜಾಹೀರು ಗೊಳಿಸಿದ್ದರೂ,,ಕೂಡ ಆ ಕ್ಷಣದಲ್ಲಿ ಅದನ್ನೆಲ್ಲಾ ಬದಿಗೊತ್ತಿ,ಸಿಗಾರಿನ ಮೊನೆಗೆ ಬೆಂಕಿ ತಾಗಿಸಿ ದೀರ್ಘವಾಗಿ * ಧಂ?'*'ಎಳೆದು ಪಕ್ಕಕ್ಕೆ ತಿರುಗಿದಾಗ ಕಂಡಿದ್ದು ಸಣ್ಣದೊಂದು ಜಗಳ. ಅದೇನೆಂದು ನೋಡುವ ಮನಸ್ಸಿಲ್ಲದಿದ್ದರೂ ಮಾನವ ಸಹಜವಾದ ಕೆಟ್ಟ ಕುತೂಹಲ ನನ್ನನ್ನತ್ತ ಸೆಳೆದೊಯ್ದಿತ್ತು. ಕುರುಚಲು ಗಡ್ಡದ ವ್ಯಕ್ತಿಯೊಬ್ಬ ಬಾರೊಂದರ ಮಾಲೀಕನೊಟ್ಟಿಗೆ ಜಗಳದಲ್ಲಿ ನಿರತನಾಗಿದ್ದ. ಬಾರ್ ನ ಮಾಲೀಕ ಜೋರುಜೋರು ಮಾತುಗಳೊಟ್ಟಿಗೆ ಗರಂ ಆಗಿದ್ದ. ಎದುರಿನ ವ್ಯಕ್ತಿ ದೈನೇಸಿ ಸ್ಥಿತಿಯಲ್ಲಿ ನಿಂತಿದ್ದ ಎಂದು ನನಗನ್ನಿಸಿತಾದರೂ ಸುತ್ತಲಿನ ಜನಕ್ಕೆ ಹಾಗನ್ನಿಸಿದಂತಿರಲ್ಲ. ಯಾವುದೋ ದಾರಿ ಜಗಳ ಎನಿಸಿ ಹೊರಡಲು ತಯಾರಾಗುತ್ತಿದ್ದಂತೆ ಅದುವರೆಗೆ ನೋಡಿದ ನೋಟ ಕಣ್ಣಿನ ಮೂಲಕ ಸಾಗಿ ಮಸ್ತಿಷ್ಕವನ್ನು ತಲುಪಿ ಆ ಎದುರಿನ ವ್ಯಕ್ತಿಯನ್ನು ಎಲ್ಲೋ ನೋಡಿದಂತೆ ಭಾಸವಾಗಿತ್ತು. ಅರೇ..! ಎಂದು ಮತ್ತೊಮ್ಮೆ ನೆನಪಿನ ಪುಟಗಳನ್ನು ತೆರೆಯುತ್ತಾ ಹೋದಂತೆ ಸ್ಮೃತಿ ಪಟಲದ ಮೇಲೆ ಹಾದು ಬಂದವನು ಹಿಂದೊಮ್ಮೆ ನನ್ನ ಸಹೋದ್ಯೋಗಿಯಾಗಿದ್ದ, ತಾನು ಮೇಲಧಿಕಾರದಲ್ಲಿದ್ದೇನೆಂಬ ಹಮ್ಮಿನಲ್ಲಿ ನನ್ನನ್ನೂ ಸೇರಿಸಿದಂತೆ ನಮ್ಮೊಟ್ಟಿಗಿನ ಉದ್ಯೋಗಿಗಳನ್ನು ಕಾಡಿಸಿ ಪೀಡಿಸುತ್ತಿದ್ದ, ಪ್ರೀತಿುಂದಲೋ,ದ್ವೇಷದಿಂದಲೋ ನಾವೆಲ್ಲರೂ ಅಡ್ಡಹೆಸರಿಟ್ಟಿದ್ದ ಶ್ರೀಮಾನ್ ಕಟೋರಿ. ಅಂದು ಹಾಗೆಲ್ಲಾ ಎಲ್ಲರನ್ನೂ ಪೀಡಿಸಿ ಒಂದು ರೀತಿಯ ದಾದಾನಂತೆ ಬೆಳೆದು,ಜೀವಿಸಿದ್ದ ಕಟೂರಿ ಇವನೇನಾ ಎನಿಸಿ ಮತ್ತೊಮ್ಮೆ ಅವನತ್ತ ನೋಡಿದ್ದೆ. ಅದಾಗಲೇ ಅವನ ಕಣ್ಣು ನನ್ನನ್ನು ಗುರುತಿಸಿಬಿಟ್ಟಿದ್ದವು. ಅವನು ನನ್ನ ಹೆಸರಿಡಿದು ಕೂಗುತ್ತಾ ನನ್ನೆಡೆಗೆ ಓಡುತ್ತಲೇ ಬಂದುಬಿಟ್ಟಿದ್ದ. ಸುತ್ತಲಿನ ಜನ ನನ್ನನ್ನೇ ನೋಡತೊಡಗಿದಾಗ ನನಗೆ ವಿಪರೀತ ಎಂಬಷ್ಟು ಮುಜುಗರವಾದರೂ ಅಲ್ಲಿಂದ ಹೊರಟು ಹೋಗಲು ಮನಸ್ಸಾಗದೆ ಅಲ್ಲಿಯೇ ನಿಂತೆ. ಕಟೂರಿ ನನ್ನ ಬಳಿಗೆ ಬಂದವನೇ ತಾನು ಹಿಂದೆ ಮಾಡಿದ ತಪ್ಪುಗಳೆಲಲ್ಲವನ್ನೂ ಕ್ಷಮಿಸುವಂತೆ ಕಣ್ಣಿನಲ್ಲಿಯೇ ಕೋರಿ ಫಿಪ್ಟಿ ರುಪೀಸ್ ಪ್ಲೀಸ್ ಎನ್ನುತ್ತ ಕೈ ಒಡ್ಡಿದ್ದ. ನಾನು ಮರುಮಾತನಾಡದೆ ಐವತ್ತು ರೂಪಾಯಿ ನೋಟನ್ನು ಅವನ ಕೈಗಿಟ್ಟಿದ್ದೆ. ಅವನು ಕೂಡಲೇ ಅದನ್ನು ತೆಗೆದುಕೊಂಡು ಆ ಬಾರ್ ಮಾಲೀಕನ ಕೈಗೆ ತುರುಕಿ ನನಗೊಂದು ಥ್ಯಾಂಕ್ಸ್ ಅನ್ನೂ ಹೇಳಲು ಮರೆತವನಂತೆ ದುಡುದುಡನೆ ಹೊರಟು ಹೋಗಿದ್ದ. ಮನಸ್ಸಿನಲ್ಲಿ ಅದೆಂತದೋ ಅರ್ಥವಾಗದ ಭಾವವೊಂದು ಮೂಡಿ ಮರೆಯಾಗಿತ್ತು. ಮನಸ್ಸು ತನ್ನ ವಿಷಣ್ಣತೆಯನ್ನು ಹೋಗಲಾಡಿಸಿಕೊಳ್ಳಲು ಮತ್ತೊಂದು ಸಿಗಾರ್ ಅನ್ನು ಸೇದುವಂತೆ ಮನಸ್ಸು ಆಮಿಷವೊಡ್ಡುತ್ತಿತ್ತು..
--ಮ.ನಾ.ಕೃಷ್ಣಮೂರ್ತಿ ಮೊ:9449994934 e-mail- manaakrish44@gmail.com

No comments:

Post a Comment